ಚಮಚಮುಖಿ-
ಕಬ್ಬಾರೆ, ಕ್ರೌಂಚ (ಹೆರಾನ್), ಕೆಂಪು ಕೊಕ್ಕರೆ, ಮತ್ತು ಐಬಿಸ್‍ಗಳಿಗೆ ಹತ್ತಿರ ಸಂಬಂಧಿಯಾದ ಮತ್ತು ನೀರಿನಲ್ಲಿ ನಡೆದಾಡುವ ಒಂದು ದೊಡ್ಡಹಕ್ಕಿ (ಸ್ಪೂನ್‍ಬಿಲ್). ಇದರಲ್ಲಿ ಸುಮಾರು 6 ಪ್ರಭೇದಗಳಿವೆ. ಇವು ಸಿಕೋನೈಯಿಫಾರ್ಮೀಸ್ ಗಣದ ತ್ರೆಸ್ಕಿಯಾರ್ನಿತಿಡೀ ಕುಟುಂಬಕ್ಕೆ ಸೇರಿವೆ. ಜೌಗುಪ್ರದೇಶಗಳ ಬಳಿಯೇ ಇವುಗಳ ವಾಸ. ಕೊಕ್ಕು ಉದ್ದವಾಗಿಯೂ ತುದಿಯಲ್ಲಿ ಚಮಚದಂತೆ ಅಗಲವಾಗಿಯೂ ಇರುವುದರಿಂದ ಇವಕ್ಕೆ ಈ ಹೆಸರು. ಇಂಥ ಕೊಕ್ಕಿರುವುದರಿಂದ ತಮ್ಮ ಆಹಾರವಾದ ಕಪ್ಪೆ. ಮೀನು, ಏಡಿ, ಕಠಿಣ ಚರ್ಮಿಗಳು, ಕೀಟಗಳು ಮುಂತಾದ ಜಲಚರ ಪ್ರಾಣಿಗಳನ್ನು ಹಿಡಿದು ತಿನ್ನಲು ಅನುಕೂಲ. ನೀರಿನಲ್ಲಿ ನಡೆದಾಡಲು ಸಹಾಯವಾಗುವಂತೆ ಇವುಗಳ ಕಾಲಗಳು ಬಲು ಉದ್ದವಾಗಿವೆ. ತಮ್ಮ ಕೊಕ್ಕನ್ನು ಭಾಗಶಃ ತೆರೆದುಕೊಂಡು, ನೀರಿನಲ್ಲಿ ಮುಳುಗಿಸಿ ತಲೆಯನ್ನು ಅತ್ತಿತ್ತ ಅಡಿಸುತ್ತ ಆಹಾರವನ್ನರಸಿಕೊಂಡು ಅಲೆದಾಡುತ್ತವೆ. ಆಹಾರ ಸೇವನೆಯ ಕಾಲ ಬೆಳಗ್ಗೆ ಮತ್ತು ಸಂಜೆ.

ಚಮಚಮುಖಿಗಳ ದೇಹದ ಗಾತ್ರ ಹೆಚ್ಚುಕಡಿಮೆ ಬಾತುಹಕ್ಕಿಯಷ್ಟು. ಭಾರತದಲ್ಲಿ ಕಾಣದೊರೆಯುವ ಪ್ಲಾಟೇಲಿಯ ಲ್ಯೂಕೊರಾಡಿಯ ಪ್ರಭೇದದ ಚಮಚ ಮುಖಿಯ ದೇಹದ ಬಣ್ಣ ಅಚ್ಚಬಿಳಿ, ಕಾಲುಗಳು ಕಪ್ಪು. ಅಮೆರಿಕ ಸಂಯುಕ್ತ ಸಂಸ್ಥಾನ, ವೆಸ್ಟ್‍ಇಂಡೀಸ್, ಅರ್ಜಂಟೀನ ಮುಂತಾದೆಡೆ ವಾಸಿಸುವ ಅಜಾಯಿಯ ಅಜಾಜ (ರೋಸಿಯೇಟ್ ಸ್ಪೂನ್ ಬಿಲ್) ಎಂಬ ಪ್ರಭೇದದ ಚಮಚಮುಖಿಯ ದೇಹದ ಬಣ್ಣ ಗುಲಾಬಿ, ಕಾಲುಗಳು ಕೆಂಪು. ಭಾರತದ ಬಗೆಯಲ್ಲಿ ಹೆಗ್ಗತ್ತಿನ ಮೇಲೆ ಪುಕ್ಕ ಮಕುಟವೊಂದಿದೆ. ಆಮೆರಿಕದ ಚಮಚಮುಖಿಯ ಎದೆಯ ಭಾಗದಲ್ಲಿ ಪುಕ್ಕಗಳ ಗುಚ್ಛವಿದೆ.
ಚಮಚಮುಖಿಗಳು ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಗಿ — ಆಕಾರದ ಸಾಲುಗಳಲ್ಲಿ ಹಾರುವುದು ಇವುಗಳ ವಿಶೇಷ ಲಕ್ಷಣ. ನೀರಿನಲ್ಲಿ ಬೆಳೆಯುವ ಜೊಂಡು ಸಣ್ಣಗಾತ್ರದ ಮರ ಮುಂತಾದುವುಗಳಲ್ಲಿ ಒರಟು ಕಡ್ಡಿಗಳನ್ನು, ಎಲೆಗಳನ್ನು ಬಳಸಿಕೊಂಡು ಗೂಡುಕಟ್ಟುತ್ತವೆ. ಮೆಲ್ದನಿಯ ಗುರುಗುಟ್ಟುವಿಕೆ ಅಥವಾ ಕೊಕ್ಕುಗಳನ್ನು ಪರಸ್ಪರ ತಾಡಿಸಿದಾಗ ಉಂಟಾಗುವ ಲಟಪಟಶಬ್ದಗಳನ್ನು ಬಿಟ್ಟರೆ ಇನ್ನಾವ ರೀತಿಯ ಸದ್ದನ್ನೂ ಇವು ಮಾಡವು.

	ಇವು ಮಟ್ಟೆಯಿಡುವ ಕಾಲ ಜುಲೈ-ನವೆಂಬರ್, ಮೊಟ್ಟೆಗಳ ಬಣ್ಣ ಮಾಸಲು ಬಿಳಿ; ಮೇಲೆಲ್ಲ ಕಂದುಮಚ್ಚೆಗಳುಂಟು; ಸಂಖ್ಯೆ 4-5.

ಮೇಲೆ ಹೇಳಿದ ಎರಡು ಬಗೆಗಳಲ್ಲದೆ ಇನ್ನಿತರ ಚಮಚಮುಖಿಗಳ ವ್ಯಾಪ್ತಿ ಈ ರೀತಿ ಇದೆ: ಪ್ಲಾಟಿಬಿಸ್ ಫ್ಲೇವಿಪಸ್-ಆಸ್ಟ್ರೇಲಿಯದಲ್ಲಿ ವಾಸಿಸುತ್ತದೆ; ಪ್ಲಾಟೇಲಿಯ ರೀಜಿಯ-ಆಸ್ಟ್ರೇಲಿಯ, ನ್ಯೂಜೀಲೆಂಡ್, ನ್ಯೂಗಿನಿ, ಮುಂತಾದೆಡೆ ಕಾಣದೊರೆಯುತ್ತವೆ; ಪ್ಲಾ. ಮೈನರ್-ಕೊರಿಯ, ದಕ್ಷಿಣ ಜಪಾನ, ದಕ್ಷಿಣ ಚೀನ, ಫಿಲಿಪೀನ್ಸುಗಳಲ್ಲಿ ಜೀವಿಸುತ್ತದೆ; ಪ್ಲಾ, ಆಲ್ಬ-ಆಫ್ರಿಕದ ಸಹರಾ ಮರುಭೂಮಿಯ ದಕ್ಷಿಣ ಭಾಗ ಮತ್ತು ಮಡಗಾಸ್ಕರ್‍ಗಳಲ್ಲಿ ವಾಸಿಸುತ್ತದೆ.

ಅಮೆರಿಕದ ಗುಲಾಬಿ ಚಮಚಮುಖಿಯನ್ನು ಚೆಲುವಾದ ರೆಕ್ಕೆಪುಕ್ಕಗಳಿಗಾಗಿ ಬೇಟೆಯಾಡುತ್ತಿದ್ದುದರಿಂದ ಅದು ನಿರ್ವಂಶವಾಗುವ ಸ್ಥಿತಿಗೆ ಬಂದಿತ್ತು. ಆದರೆ ಈಗೀಗ ಕಾನೂನಿನ ರಕ್ಷಣೆ ದೊರೆತಿರುವುದರಿಂದ ಫ್ಲಾರಿಡದ ಕೆಲವು ಪ್ರದೇಶಗಳಲ್ಲಿ ಸಣ್ಣಪುಟ್ಟ ಗುಂಪುಗಳನ್ನು ಕಾಣಬಹುದು.

(ಕೆ.ವಿ.ಆರ್.ಜಿ.)
(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ